ಗ್ರೆಗೊರಿ

ರೋಮನ್ ಕೆಥೋಲಿಕ್ ಸಂಪ್ರದಾಯದಲ್ಲಿನ 16 ಜನ ಗುರುಗಳಿಗೆ ಈ ಹೆಸರಿದೆ. ಅವರಲ್ಲಿ ಮುಖ್ಯವಾದ ಕೆಲವರ ವಿಷಯವನ್ನಿಲ್ಲಿ ಸಂಗ್ರಹಿಸಲಾಗಿದೆ.

ಗ್ರೆಗೊರಿ I : (ಕ್ರಿ. ಶ. ಸು. 540 - 604) ಕ್ರೈಸ್ತ ಧರ್ಮಸಭೆಯ ಇತಿಹಾಸದಲ್ಲಿ ಈತನಿಗೆ ವಿಶೇಷ ಸ್ಥಾನವುಂಟು. ಕ್ರೈಸ್ತ ಸಂತರ ಪಟ್ಟಿಯಲ್ಲಿ ಇವನ ಹೆಸರಿದೆ. ಈತ ಪ್ರವೀಣ ರೋಮನ್ ನ್ಯಾಯವಾದಿ, ದಕ್ಷ ಆಡಳಿತಗಾರ, ಸಂನ್ಯಾಸಿ, ಧರ್ಮ ಪ್ರಚಾರಕ, ಕ್ರೈಸ್ತರ ಮುಖಂಡ, ಉದ್ದಾಮ ಪಂಡಿತ. ಮಹಾಸಯನೆಂಬ ಬಿರುದಿಗೆ ಭಾಜನ. ಮಧ್ಯ ಯುಗದ ಪೋಪ್ ಪದದ ಪಿತಾಮಹನೆಂಬ ಹೆಸರು ಗಳಿಸಿದವ. ಧಾರ್ಮಿಕ ವಿಷಯಗಳಲ್ಲಿ ರೋಮಿನ ಪೋಪ್ ಅವರಿಗೆ ವ್ಯವಹಾರದಲ್ಲಿ ಸರ್ವೋನ್ನತ ಅಧಿಕಾರವಿದೆ ಎಂದು ಪ್ರತಿಪಾದಿಸಿ ತೋರಿಸಿದ ಕೀರ್ತಿ ಈತನಿಗೆ ಸಲ್ಲುತ್ತದೆ. ಕ್ರೈಸ್ತ ಧರ್ಮದ ತತ್ತ್ವ, ಆಡಳಿತ ಹಾಗೂ ವಿಧಿನಿಯಮಗಳ ಮೇಲೆ ಈತನ ಪ್ರಭಾವ ಗಣನೀಯವಾಗಿದೆ. ಮಧ್ಯಯುಗದ ಕ್ರೈಸ್ತಧರ್ಮದ ಬಗ್ಗೆ ಮಾಹಿತಿ ದೊರೆಯಬೇಕಾದರೆ ಈತನನ್ನು ಮರೆಹೊಗದೆ ವಿಧಿ ಇಲ್ಲ. ಅಲ್ಲಿಂದೀಚೆಗೆ ಅನುಷ್ಠಾನಕ್ಕೆ ಬಂದಂಥ ಕ್ರೈಸ್ತ ಧರ್ಮದ ತತ್ತ್ವ, ಭಕ್ತಿಮಾರ್ಗ, ನಿಯಮ, ನಿಷೇಧ, - ಇವುಗಳ ಮೇಲೆ ಈತ ಪರಿಣಾಮಕಾರಿಯಾದ ಪ್ರಭಾವ ಬೀರಿದ್ದಾನೆಂದು ತಜ್ಞರ ಅಭಿಪ್ರಾಯ.
ಈತ ಶ್ರೀಮಂತ ಕುಟಂಬವೊಂದರಲ್ಲಿ ಜನಿಸಿದ. ತಂದೆ ಗೊರ್ಡಿಯಾನಸ್, ತಾಯಿ ಸಿಲ್ವಿಯ; ಸ್ತ್ರೀಸಂತರಲ್ಲಿ ಒಬ್ಬಳು. ಗ್ರೆಗೊರಿಯ ಬಾಲ್ಯದ ಬಗ್ಗೆ ಏನೂ ತಿಳಿದಿಲ್ಲ. ಅನುಕೂಲ ವಾತಾವರಣದಲ್ಲಿ ಬೆಳೆದು, ವಿದ್ಯಾಭ್ಯಾಸದಲ್ಲಿ ಅಪ್ರತಿಮ ಪ್ರತಿಭೆಯನ್ನು ವ್ಯಕ್ತಪಡಿಸಿದನೆಂಬುದಷ್ಟೇ ಗೊತ್ತು.

ಕ್ರಿ.ಶ 573 ರಲ್ಲಿ ಈತ ರೋಮ್ ನಗರದ ಪ್ರಥಮ ಪ್ರಜೆಯಾಗಿ ಆಡಳಿತ ನಡೆಸಿದ. ಆದರೆ ಸಂನ್ಯಾಸದ ಕಡೆ ಅದಮ್ಯ ಒಲವು ಮೂಡಿದುದರ ಪ್ರಯುಕ್ತ ತನ್ನ ಸ್ಥಾನವನ್ನು ತ್ಯಜಿಸಿ ಸಂನ್ಯಾಸಿ ಮಠಕ್ಕೆ ಸೇರಿದ (574). ಸಿಸಿಲಿಯಲ್ಲಿದ್ದ ತನ್ನ ಸ್ವತ್ತನ್ನೆಲ್ಲ ಮಾರಿ ಅಲ್ಲಿ ಆರು ಸಂನ್ಯಾಸಿ ಮಠಗಳನ್ನು ಸ್ಥಾಪಿಸಿದ. 574ರಿಂದ 598ರವರೆಗೆ ಮಠದಲ್ಲಿದ್ದುಕೊಂಡು ಜಪ, ಧ್ಯಾನ, ತಪಸ್ಸುಗಳಲ್ಲಿ ಮಗ್ನನಾಗಿದ್ದ. 
ಕ್ರಿ.ಶ. 579ರಲ್ಲಿ ರೋಮಿನ ಮೇಲೆ ಲೊಂಬಾರ್ಡರ ದಾಳಿ ತೀವ್ರವಾಗುವುದರಲ್ಲಿದ್ದಾಗ, ಆಗಿನ ಪೋಪ್ ಪೆಲಾಜಿಯಸ್ II ಸೈನ್ಯ ಸಹಾಯ ಬೇಡಿ ಕಾನ್‍ಸ್ಟಾಂಟಿನೋಪಲಿನ ಚಕ್ರಾಧಿಪತಿಯ ಆಸ್ಥಾನಕ್ಕೆ ಗ್ರೆಗೊರಿಯನ್ನು ರಾಯಭಾರಿಯಾಗಿ ಕಳುಹಿಸಿದ. ಅಲ್ಲಿ ಗ್ರೆಗೊರಿ ಏಳು ವರ್ಷಗಳ ಕಾಲ ಇದ್ದು, ಮರಳಿ ರೋಮಿಗೆ ಬಂದು ಮಠಾಧಿಪತಿಯಾದ. 
ಈ ಸಮಯದಲ್ಲಿ ಇಂಗ್ಲೆಂಡಿನಿಂದ ಬಂದ ಗುಲಾಮ ಯುವಕರನ್ನು ಗ್ರೆಗೊರಿ ಭೇಟಿಯಾದನೆಂದು ಪ್ರತೀತಿ. ಆ ದೇಶದಲ್ಲಿ ಕ್ರೈಸ್ತಧರ್ಮ ಪ್ರಚಾರ ಮಾಡಬೇಕೆಂಬ ಸಂಕಲ್ಪದಿಂದ ಅಲ್ಲಿಗೆ ಹೊರಟ ಗ್ರೆಗೊರಿ ಮೂರು ದಿನಗಳ ಪ್ರಯಾಣ ಮಾಡುವಷ್ಟರಲ್ಲಿ ರೋಮಿನ ಪೋಪ್ ಪೆಲಾಜಿಯಸ್ II ದೈವಾಧೀನನಾದುದರಿಂದ ಹಿಂತಿರುಗಿ ಬಂದು ತಾನೆ ಪೋಪ್ ಗುರುವಾಗಬೇಕಾಯಿತು (590). 

ಗ್ರೆಗೊರಿ ಅಧಿಕಾರಸೂತ್ರಗಳನ್ನು ವಹಿಸಿದ ತರುವಾಯ, ಪೋಪರಿಗೆ ಸೇರಿದ ಪ್ರದೇಶಗಳು ಶ್ರೀಮಂತವಾದವು.

	ಕ್ರೈಸ್ತಧಾರ್ಮಿಕ ವಿಧಿವಿಧಾನದಲ್ಲಿ ಏಕರೂಪತೆ ಬದಲಾಗಿ ವಿಭಿನ್ನತೆಯನ್ನು ಗ್ರೆಗೊರಿ ಅನುಮೋದಿಸಿದ. ಕ್ರೈಸ್ತಗುರುಗಳು ಅವಿವಾಹಿತರಾಗಿರಬೇಕೆಂದು ಕಡ್ಡಾಯದ ನಿಯಮವನ್ನು ಅನುಷ್ಠಾನಕ್ಕೆ ತರುವುದರಲ್ಲಿ ಈತ ಆಸಕ್ತಿ ವಹಿಸಿದ. ಕ್ರೈಸ್ತ ಗುರುಗಳು ಕೇವಲ ಕ್ರೈಸ್ತ ನ್ಯಾಯಾಲಯಗಳ ಮಾತ್ರ ವಿಚಾರಣೆಗೆ ಒಳಗಾಗಬೇಕೆಂಬ ಮಸೂದೆಯನ್ನು ಹೊರಡಿಸಿದ. ಇಟಲಿಯ ಸಿಂಹಾಸನ ತೆರವಾಗಿದ್ದುದರಿಂದ ಈತ ಆ ಸ್ಥಾನದಲ್ಲಿದ್ದು ಯಶಸ್ವೀ ರಾಜಕಾರಣಿಯಾಗಿ ಆಡಳಿತ ನಡೆಸಿದ. ನಗರಗಳಿಗೆ ರಾಜ್ಯಪಾಲರನ್ನು ನೇಮಿಸಿ, ದಂಡನಾಯಕರಿಗೆ ಆಜ್ಞೆಗಳನ್ನು ರವಾನಿಸಿ, ರಣರಂಗಕ್ಕೆ ಶಸ್ತ್ರಾಸ್ತ್ರಗಳ ಸರಬರಾಜಿನ ವ್ಯವಸ್ಥೆ ಮಾಡಿದ; ಕ್ರೈಸ್ತ ಸಂನ್ಯಾಸಿಗಳ ಜೀವನ ವ್ಯವಹಾರ ಬಗ್ಗೆ ಕಟ್ಟುನಿಟ್ಟಿನ ವಿಧಿವಿಧಾನಗಳನ್ನು ಜಾರಿಗೆ ತಂದು, ಫ್ರಾನ್ಸ್, ಇಟಲಿ, ಸಿಸಿಲಿ, ಸಾರ್ಡೀನಿಯ, ಕಾರ್ಸಿಕ, ಸ್ಪೇನ್, ಆಫ್ರಿಕ ಮುಂತಾದಡೆಗಳಲ್ಲಿ ಕ್ರೈಸ್ತ ಧರ್ಮಕ್ಕೆ ವಿರುದ್ಧವಾದ ತಂಡವಾದಗಳನ್ನು ನಿರ್ಮೂಲಗೊಳಿಸುವುದರಲ್ಲಿ ಯಶಸ್ವಿಯಾದ. ಹೀಗೆ ಧಾರ್ಮಿಕ ಮತ್ತು ರಾಜಕೀಯದ ಜೀವನವನ್ನು ಯಶಸ್ವಿಯಾಗಿ ಸಮನ್ವಯಗೊಳಿಸಿದವರಲ್ಲಿ ಈತ ಅದ್ವಿತೀಯ. ಕ್ರೈಸ್ತ ಸಂಗೀತದ ಸುಧಾರಣೆ ಮತ್ತು ಧಾರ್ಮಿಕ ಸಂಸ್ಕಾರಗಳ ವಿತರಣೆಗಳಲ್ಲಿ ಪ್ರಗತಿಶೀಲ ರೀತಿನೀತಿಗಳನ್ನು ಈತ ಅನುಷ್ಠಾನಕ್ಕೆ ತಂದನೆಂದು ಹೇಳಲಾಗಿದೆ. ಈತ ಕ್ರೈಸ್ತಧರ್ಮ ಹಾಗೂ ತತ್ತ್ವಗಳ ಬಗ್ಗೆ ಅನೇಕ ಗ್ರಂಥಗಳನ್ನು ರಚಿಸಿದ್ದಾನೆ. 	
				(ಡಿ.ಪಿ.ಡಬ್ಲ್ಯು.)
ಗ್ರೆಗೊರಿ VII : 1073 --- 85. ಘನವಂತಿಕೆಯ ಪೋಪರಲ್ಲಿ ಅಗ್ರಗಣ್ಯನಾದ ಈತ ಹಿಲ್ಡಿಬ್ರ್ಯಾಂಡ್ ಎಂಬ ಪೂರ್ವಾಶ್ರಮದ ಹೆಸರುಳ್ಳವನಾಗಿದ್ದು 1021ರಲ್ಲಿ ಟಸ್ಕನಿಯ ಒಂದು ಬಡ ಕುಟುಂಬದಲ್ಲಿ ಜನಿಸಿದ. ಬೆನೆಡಿಕ್ಟಿಯನ್ ಸಂಪ್ರದಾಯದ ಸಂನ್ಯಾಸಿಯಾಗಿ ಪೋಪ್ ಗ್ರೆಗೊರಿ VI ಕಾರ್ಯದರ್ಶಿಯಾಗಿ ಕೆಲಸ ಮಾಡಿದ. ಮುಂದಿನ ಪೋಪರಾಗಿದ್ದ ಲಿಯೊ IX, ವಿಕ್ಟರ್ II ಸ್ಟೀಫನ್ X ಮೊದಲಾದವರ ಕಾಲದಲ್ಲಿ ಹೋಲಿ ರೋಮನ್ ಚರ್ಚಿನ ಆರ್ಚ್‍ಡೀಕನ್ ಆದ. ತನ್ನ ಚಟುವಟಿಕೆಯಿಂದ ಸೂಕ್ಷ್ಮಮತಿಯಿಂದ ಚರ್ಚನ್ನು ಸಂಘಟಿಸುವಲ್ಲಿ ಈತ ಯಶಸ್ವಿಯಾದ. 

ತಾನು ಪೋಪನಾದಾಗ ನೈಜ ಧಾರ್ಮಿಕವೃತ್ತಿಯ ಅರ್ಚಕವೃಂದದ ಸೃಷ್ಟಿಗಾಗಿ ಕಟ್ಟುನಿಟ್ಟಿನ ಸುಧಾರಣೆಗಳನ್ನು ಈತ ಜಾರಿಗೆ ತಂದ. ನೈತಿಕ ಅಧಃಪತನಕ್ಕೆ ಒಳಗಾಗಿದ್ದ ಪಾದ್ರಿಗಳನ್ನು ಹೊರಗಟ್ಟಲು ಬದ್ಧ ಕಂಕಣನಾಗಿ ಕೆಲಸ ಮಾಡಿದ. ಪಾದ್ರಿಗಳಲ್ಲಿ ಬ್ರಹ್ಮಚರ್ಯವನ್ನು ಒತ್ತಾಯಿಸುವಲ್ಲಿ ಜರ್ಮನಿಯ ಪಾದ್ರಿಗಳು ತೋರಿದ ವಿರೋಧವನ್ನು ಎದುರಿಸಿದ. ಈತನ ತೀವ್ರತರ ಯತ್ನಗಳಿಂದ ಚರ್ಚಿನ ಸ್ಥಿತಿಗತಿ ಸುಧಾರಿಸಿ ಅದರ ಪ್ರತಿಷ್ಠೆ ಹೆಚ್ಚುವಂತಾಯಿತು. ಬಿಷಪ್ಪರಿಗೆ ಅಧಿಕಾರ ದಾನ ಮಾಡುವ ವಿಚಾರದಲ್ಲಿ ಸಮ್ರಾಟ್ ಹೆನ್ರಿ IV ಯನ್ನು ವಿರೋಧಿಸಿದ. ಸಾಮ್ರಾಟ ಪೋಪನನ್ನು ಪದುಚ್ಯುತಗೊಳಿಸಿರುವುದಾಗಿ ಘೋಷಿಸಿದ. ಗ್ರೆಗೊರಿ ಸಮ್ರಾಟನ ಮೇಲೆ ಧಾರ್ಮಿಕ ಬಹಿಷ್ಕಾರ ಸಾರಿದ. ಪೋಪನ ಈ ಕ್ರಮದಿಂದ ತನ್ನ ಬೆಂಬಲಿಗರ ನಿಷ್ಠೆಗೆ ಎರವಾದ ಹೆನ್ರಿ ಕೆನೊಸಾದಲ್ಲಿ ಮೂರು ದಿನ ಚಳಿಯಲ್ಲಿ ಕಾದಿದ್ದು ಪೋಪನ ಕ್ಷಮೆ ಬೇಡಿದ. ಆಗ್ಸ್‍ಬರ್ಗಿನ್ಲಿ ಸೇರಲಿರುವ ಚರ್ಚಿನ ಕೌನ್ಸಿಲನ ಮುಂದೆ ಹಾಜರಾಗಲು ಆಜ್ಞಾಪಿಸಿ ಗ್ರೆಗೊರಿ ಹೆನ್ರಿಯನ್ನು ಕ್ಷಮಿಸಿದ. 

ಹೆನ್ರಿ ಸ್ವದೇಶಕ್ಕೆ ಮರಳಿ ಪ್ರಿಪೋಪನೊಬ್ಬನನ್ನು ನೇಮಿಸಿದ. ಗ್ರೆಗೊರಿ ಹೆನ್ರಿಯನ್ನು ಮತ್ತೆ ಧಾರ್ಮಿಕ ಬಹಿಷ್ಕಾರಕ್ಕೆ ಒಳಪಡಿಸಿದ. ಹೆನ್ರಿ ರೋಮನ್ನ ಮುತ್ತಿ ನಾಲ್ಕು ವರ್ಷಕಾಲ ಅದನ್ನು ಆಕ್ರಮಿಸಿದ. ಗ್ರೆಗೊರಿ ರೋಮನ್ನು ತ್ಯಜಿಸಬೇಕಾಗಿ ಬಂತು. ಅಷ್ಟರಲ್ಲಿ ದಕ್ಷಿಣ ಇಟಲಿಯ ನಾರ್ಮನರು ರೋಮನ್ನು ಬಂಧಮುಕ್ತಗೊಳಿಸಿ ಹೆನ್ರಿಯನ್ನು ಹೊರಗಟ್ಟಿದರು. ಆದರೆ ನಾರ್ಮನ್ ಸೈನಿಕರ ಅತಿವರ್ತನೆಯಿಂದ ಗ್ರೆಗೊರಿ ರೋಮನ್ನು ಮತ್ತೆ ಬಿಡಬೇಕಾಯಿತು. ಸಾಲೆರ್ನೊ ಪಟ್ಟಣದಲ್ಲಿ ಆಶ್ರಯ ಪಡೆದಾಗ ಗ್ರೆಗೊರಿ ತೀರಿಕೊಂಡ. ಪೋಪನ ಸ್ಥಾನಮಾನ ಮತ್ತು ಚರ್ಚಿನ ಪ್ರತಿಷ್ಠೆಗಳನ್ನು ಹೆಚ್ಚಿಸಿದ ಘನವಂತಿಕೆಯ ದೃಢಸುಧಾರಣಾವಾದಿಯೆಂದು ಗ್ರೆಗೊರಿ ಖ್ಯಾತನಾಗಿದ್ದಾನೆ. 

ಗ್ರೆಗೊರಿ X : 1271 --- 76. ಧರ್ಮಯುದ್ಧಗಳಲ್ಲಿ ಭಾಗವಹಿಸಿದ್ದ ವೀರವೃತ್ತಿಯ ವ್ಯಕ್ತಿಯಾದ ಈತ ಆ ಕಾಲದಲ್ಲಿಯೇ ಪೋಪನೆಂದು ಆಯ್ಕೆಗೊಂಡ. ಗ್ರೀಕ್ ಮತ್ತು ರೋಮಿನ ಚರ್ಚುಗಳ ಐಕ್ಯಕ್ಕಾಗಿ ಯತ್ನಿಸಿ ಅದರಂತೆ 1274ರಲ್ಲಿ ಸರ್ವಾನುಮತದ ಠರಾವು ಮಾಡಿಕೊಂಡನಾದರೂ ಗ್ರೀಕ್ ಪಾದ್ರಿಗಳ ಅಸಹಕಾರದಿಂದ ಅದು ಕಾರ್ಯಗತವಾಗಲಿಲ್ಲ. 

ಗ್ರೆಗೊರಿ XIII: 1572 --- 85. ಧಾರ್ಮಿಕ ಪ್ರತಿಸುಧಾರಣಾ ಚಳವಳಿಗೆ (ಕೌಂಟರ್ ರೆಫರ್ಮೇಷನ್) ಪೂರ್ತಿ ಬೆಂಬಲ ನೀಡಿ. ಟ್ರೆಂಟಿನಲ್ಲಿ ನೆರೆದ ಕೌನ್ಸಿಲಿನ ನಿರ್ಣಯಗಳನ್ನು ಕಾರ್ಯಚರಣೆಗೆ ತರಲು ತೀವ್ರವಾಗಿ ಶ್ರಮಿಸಿದ ಈತ 1582ರ ಮಾರ್ಚ್‍ನಲ್ಲಿ ಗ್ರೆಗೊರಿಯನ್ ಕ್ಯಾಲೆಂಡರ್ ಎಂದು ಪರಿಚಿತವಾದ ತಾರೀಕು ಪಟ್ಟಿಯನ್ನು ಜಾರಿಗೆ ತಂದ. 

ಗ್ರೆಗೊರಿ XV: 1621 --- 23. ಪೋಪರ ಆಯ್ಕೆಯಲ್ಲಿ ಗುಪ್ತಮತದಾನ ಪದ್ಧತಿಯನ್ನು ಈತ ಜಾರಿಗೆ ತಂದ. ವಿದೇಶಗಳಲ್ಲಿರುವ ಕೆಥೊಲಿಕ್ ಮಿಷನುಗಳ ನಿಯಂತ್ರಣಕ್ಕಾಗಿ ರೋಮನ್ ಕಾಂಗ್ರಗೇಷನ್ ಆಫ್ ಪ್ರೊಪಗ್ಯಾಂಡ ಎಂದು ಪರಿಚಿತವಾದ ಸಂಸ್ಥೆಯನ್ನು ಸ್ಥಾಪಿಸಿದಾತ.									(ಎಸ್.ಎನ್.ಕೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ